ಅಸಿಲಿಡೇ
	ಡಿಪ್ಟೆರ ಉಪವರ್ಗದ ಒಂದು ಕುಟುಂಬ. ರೂಢನಾಮ ದರೋಡೆ ನೊಣ-ಈ ನೊಣಗಳು ಕೆಚ್ಚೆದೆಯಿಂದ ಇತರ ಕೀಟಗಳ ರಕ್ತವನ್ನು ಹೀರುವುದರಿಂದ ಈ ಹೆಸರು. ಕೊಡತಿ ಹುಳುಗಳನ್ನು ಮುತ್ತಿ ನಾಶಮಾಡುತ್ತವೆ. ರೋಮಗಳ ಹೊದಿಕೆಯಿರುವ ದೊಡ್ಡ ದೇಹ. ಸುಮಾರು 1" ಉದ್ದ, ಬಣ್ಣ ಹಳದಿ; ಕೆಂಬಣ್ಣದ ದಪ್ಪ ಕಾಲುಗಳ ಮೇಲೆ ಕೂದಲಿನಂಥ ರಚನೆಗಳು; ಹೊಟ್ಟೆಯ ಕೆಳಭಾಗ ಕಪ್ಪು; ರೆಕ್ಕೆಗಳು ದೊಡ್ಡದಾಗಿವೆ, ಬಣ್ಣ ಕಂದು. ಈ ನೊಣದ ಮರಿಗಳು ತೇವದ ಭೂಮಿಯಲ್ಲಿ ವಾಸಮಾಡುತ್ತವೆ; ಇತರ ಜೀವಿಗಳನ್ನು ಕೊಂದು ತಿನ್ನುತ್ತವೆ. ಅಮೆರಿಕದ ಟ್ರಾನ್ಸ್‍ಪೇಮಿಯ ಎವಿಪೊರ ಎಂಬ ಪ್ರಭೇದ ಜೇನು ನೊಣಗಳನ್ನೇ ತಿಂದು ಬದುಕುವುದು.

(ಪಿ.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ